ಕೃಷಿ ದೇವತೆಗಳು

ಪ್ರಾಚೀನರು ನಂಬಿದ್ದ ದೇವತೆಗಳಲ್ಲಿ ಕೃಷಿಗೆ ಸಂಬಂಧಪಟ್ಟ ದೇವತೆಗಳು ಒಂದು ಗುಂಪಿನವರು. ಇವರಲ್ಲಿ ಕೆಲವರು ಪುರುಷದೇವತೆಗಳು. ಐಗುಪ್ತರ ದೇವತೆ ಓಸಿರಿಸ್ ಮೊದಲಿಗೆ ಕೃಷಿ ದೇವತೆಯಾಗಿದ್ದು ಅನಂತರದಲ್ಲಿ ಸರ್ಪೋತ್ತಮ ದೇವತೆಯಾದ. ಸಾಮಾನ್ಯವಾಗಿ ಭೂಮಿತಾಯಿ ಪೃಥಿವಿ ಎಲ್ಲ ದೇಶದ ಜನರಲ್ಲೂ ಕೃಷಿಗೆ ಸಂಬಂಧಪಟ್ಟ ಮುಖ್ಯ ದೇವತೆ. ಭಾರತದಲ್ಲಿ ಮಾತೃದೇವತೆ ಮೊಹೆಂಜೊದಾರೋ ಸಂಸ್ಕøತಿಯಷ್ಟು ಹಳೆಯವಳು. ಮಳೆರಾಯ (ಪರ್ಜನ್ಯ) ಕೃಷಿಗೆ ಸಂಬಂಧಪಟ್ಟ ದೇವತೆ. ಗಂಗಾ, ಯಮುನಾ, ಕಾವೇರಿ ಮುಂತಾದ ನದೀ ದೇವತೆಗಳು ರೈತರಿಗೆ ಎಷ್ಟು ಪ್ರಿಯವಾದ ದೇವತೆಗಳು ಎಂಬುದನ್ನು ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಸಪ್ತಮಾತೃಕೆಯರು ಹಳ್ಳಿಯವರ ಮುಖ್ಯ ದೇವತೆಗಳು. ಇವರು ಬೆಳೆಯ ಸಂವೃದ್ದಿಗೆ ಕಾರಣರಲ್ಲದೆ, ರೋಗ ರುಜಿನಗಳಿಂದ ಜನರನ್ನು ಕಾಪಾಡುತ್ತಾರೆ.

	ಸಾಮಾನ್ಯವಾಗಿ ರೈತರು ಸುಗ್ಗಿಯ ಕಾಲದಲ್ಲಿ ಧಾನ್ಯದ ರಾಶಿಯನ್ನು ಧಾನ್ಯ ದೇವತೆಯಾಗಿ ಭಾವಿಸಿ ಆ ರಾಶಿಗೂ ಆಯಾ ಧಾನ್ಯದ ತೆನೆಗಳನ್ನು ಕಟ್ಟಿ ಒಂದು ವಿಗ್ರಹವನ್ನು ಮಾಡಿ ಅದಕ್ಕೂ ಪೂಜೆ ಸಲ್ಲಿಸುತ್ತಾರೆ. ಮೆಕ್ಸಿಕೊ ದೇಶದ ಜನರು ಆ ದೇಶದ ಮುಖ್ಯ ಬೆಳೆಯಾದ ಮುಸುಕಿನ ಜೋಳದಿಂದ ಒಂದು ಪ್ರತಿಮೆಯನ್ನು ಮಾಡಿ ಅದನ್ನು ಪೂಜಿಸುತ್ತಾರೆ. ಹಳ್ಳಿಯವರು ಉಳುಮೆಯ ಉಪಕರಣಗಳನ್ನು ದೇವರುಗಳಂತೆ ಭಾವಿಸಿ ಮಹಾನವಮಿಯ ದಿವಸ ಅವಕ್ಕೆ ಪೂಜೆ ಸಲ್ಲಿಸುತ್ತಾರೆ.

	ಉಳುಮೆ ಮತ್ತು ಬಿತ್ತನೆ ಕಾಲಗಳಲ್ಲೂ ತೆನೆಗೆ ಹಾಲು ತುಂಬಿದ ಕಾಲದಲ್ಲೂ ಉಳುಮೆಯ ದೇವತೆ, ಬಿತ್ತನೆಯ ದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಪ್ರಾಚೀನ ರೋಮನರು ಒಂದೊಂದು ಕೃಷಿಯ ಕ್ರಿಯೆಗೂ ಒಂದೊಂದು ನಿರ್ದಿಷ್ಟ ದೇವತೆಯನ್ನು ಕಲ್ಪಿಸಿಕೊಂಡಿದ್ದರು. ಸೆಟರ್ನಸ್ ಉಳುಮೆಯ ದೇವತೆ, ಸೀರಿಸ್ ಪೈರಿನ ಬೆಳೆವಣಿಗೆಯ ದೇವತೆ, ಬ್ಲೋನನ್ ಪುಷ್ಪದ ದೇವತೆ, ಪೊಮೊನ ಹಣ್ಣಿನ ದೇವತೆ, ಕಾನ್‍ಸಸ್ ಸುಗ್ಗಿಯ ದೇವತೆ. ಈ ಒಂದೊಂದು ದೇವತೆಯ ಪೂಜೆಗೂ ಪ್ರಾಚೀನ ರೋಮನರಲ್ಲಿ ಪ್ರತ್ಯೇಕ ಪೂಜಾರಿಗಳಿದ್ದರು. ಈ ಎಲ್ಲ ದೇವತೆಗಳಿಗೂ ವಿಶೇಷ ಉತ್ಸವಗಳು ನಡೆಯುತ್ತಿದ್ದವು. 

	ಇಂದಿನ ನಾಗರಿಕ ದೇಶಗಳಲ್ಲಿನ ಹಳ್ಳಿಗಳಲ್ಲಿ ಕೃಷಿದೇವತೆಗಳ ಮತ್ತು ಅವುಗಳಿಗೆ ಸಂಬಂಧಪಟ್ಟ ಸಂಸ್ಕಾರಗಳ ಅವಶೇಷಗಳು ಮಾತ್ರ ಉಳಿದಿವೆ. ಭಾರತದಲ್ಲಾದರೋ ಅವು ಇನ್ನೂ ಜೀವಂತವಾಗಿವೆ.              			(ಜಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ